1888-1975. ಭಾರತ ಗಣರಾಜ್ಯದ ಎರಡನೆಯ ರಾಷ್ಟ್ರಪತಿ, ಶಿಕ್ಷಣತಜ್ಞ, ಸಮರ್ಥ ಆಡಳಿತಗಾರ ಮತ್ತು ಶ್ರೇಷ್ಠ ತತ್ತ್ವಶಾಸ್ತ್ರಜ್ಞ. 'ದಾರ್ಶನಿಕರೆಲ್ಲ ದೊರೆಗಳಾಗಬೇಕು; ದೊರೆಗಳು ದಾರ್ಶನಿಕರಾಗಬೇಕು"-ಎಂಬ ಗ್ರೀಕ್ ತತ್ತ್ವಜ್ಞಾನಿ ಪ್ಲೇಟೋನ ಆದರ್ಶವನ್ನು ಸಾದರ್ಶಗೊಳಿಸಿದವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್, ಭಾರತದ ರಾಷ್ಟ್ರಪತಿಯಾಗಿ ಅವರು ಆಯ್ಕೆಗೊಂಡಾಗ, "ಇದು ತತ್ತ್ವಜ್ಞಾನಕ್ಕೆ ಸಂದ ಗೌರವ" ಎಂದವರು ಮತ್ತೊಬ್ಬ ಜಗದ್ವಿಖ್ಯಾತ ದಾರ್ಶನಿಕ ಡಾ. ಬಟ್ರ್ರೆಂಡ್ ರಸೆಲ್. ವೇದ-ವೇದಾಂತ ಡಾ. ರಾಧಾಕೃಷ್ಣನ್ ಅವರ ಧಮನಿಗಳಲ್ಲಿ ಹರಿಯುತ್ತಿತ್ತು. ಪ್ರಸ್ಥಾನತ್ರಯ ಇವರಿಗೆ ಆರ್ಷೇಯವಾಗಿ ಬಂದ ಕುಲಧನ.

ಸರ್ವಪಲ್ಲಿ ರಾಧಾಕಷ್ಣನ್ ಎಂದು ಹೆಸರಾದ ಇವರು 1888 ಸೆಪ್ಟೆಂಬರ್ 5ರಂದು ಈಗಿನ ಆಂಧ್ರ ಪ್ರದೇಶ ರಾಜ್ಯಕ್ಕೆ ಸೇರಿರುವ ಚಿತ್ತೂರು ಜಿಲ್ಲೆಯ ತಿರುತ್ತಣಿಯಲ್ಲಿ ಜನಿಸಿದರು. ತಂದೆ ವೀರಾಸ್ವಾಮಿ, ತಾಯಿ ಸೀತಮ್ಮ. ಇವರದು ಸಂಪ್ರದಾಯಸ್ಥ ಬ್ರಾಹ್ಮಣ ಮನೆತನ. ತಂದೆ ಜಮೀನ್ದಾರಿ ವ್ಯವಸ್ಥೆಗೊಳಪಟ್ಟಿದ್ದ ಪ್ರದೇಶದಲ್ಲಿ ತಹಶೀಲ್ದಾರರಾಗಿದ್ದರು. 'ಸರ್ವಪಲ್ಲಿ' ಎಂಬುದು ಇವರ ಮನೆತನದ ಹೆಸರು. ರಾಧಾಕೃಷ್ಣನ್ ಅವರ ಆರಂಭಿಕ ವಿದ್ಯಾಭ್ಯಾಸ ತಿರುಪತಿಯ ಲೂಥರ್ ಮಿಶನರಿ ಶಾಲೆಯಲ್ಲಿ (1896-1900) ನಡೆಯಿತು. ಎಳೆಯ ವಯಸ್ಸಿನಲ್ಲಿಯೇ ವೇದಾಂತ ವಿದ್ಯೆ ಇಂದಿನ ದೃಷ್ಟಿಕೋನದಿಂದ ಅಭ್ಯಾಸ. ತರುವಾಯ ವೆಲ್ಲೂರು ಕಾಲೇಜು (1900-04) ಅನಂತರ ಮದರಾಸಿನ ಕ್ರಿಶ್ಚಿಯನ್ ಕಾಲೇಜುಗಳಲ್ಲಿ (1904-08) ವಿದ್ಯಾಭ್ಯಾಸ ಮುಂದುವರಿಸಿದರು. ಇವರದು ಸಂಪ್ರದಾಯಸ್ಥ ಮನೆತನವಾಗಿದ್ದರೂ ವಿದ್ಯಾಭ್ಯಾಸ. ಆಧುನಿಕ ಶಿಕ್ಷಣ ಪಡೆಯುವ ವಿಷಯಗಳಲ್ಲಿ ಮಡಿವಂತಿಕೆ ಅಡ್ಡಬರಲಿಲ್ಲ. ಸರ್ವಪಲ್ಲಿ ಮನೆತನ ಸದಾ ಹೊಸತನಕ್ಕೆ ತೆರೆದುಕೊಂಡಿರುತ್ತಿತ್ತು. ರಾಧಾಕೃಷ್ಣನ್ ಅವರು ಓದಿನ ನಡುವೆಯೇ 1906ರಲ್ಲಿ ಶಿವಕಾಮಮ್ಮ ಎಂಬವರನ್ನು ವಿವಾಹವಾದರು.

ರಾಧಾಕೃಷ್ಣನ್ ಅವರ ಮಾತೃಭಾಷೆ ತೆಲುಗು. ಜೊತೆಗೆ ಇಂಗ್ಲಿಷ್, ಹಿಂದಿ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಗಾಧ ಪಾಂಡಿತ್ಯ ಗಳಿಸಿದ್ದರು. ವೇದ ಮತ್ತು ಉಪನಿಷತ್‍ಗಳನ್ನು ಆಳವಾಗಿ ಅಧ್ಯಯನ ಮಾಡಿದರು. ಶಿಕ್ಷಣ, ಸಂಸ್ಕೃತಿ, ಮತ್ತು ಸಾಹಿತ್ಯಗಳಿಗೆ ಸಂಬಂಧಿಸಿದ ಯಾವುದೇ ವಿಷಯ ಇವರ ಆಸಕ್ತಿಯ ಕ್ಷೇತ್ರವಾಗಿರುತ್ತಿತ್ತು. ಈ ಇಲ್ಲ ವಿಷಯಗಳನ್ನು ಕುರಿತಂತೆ ಇವರು ವಿಪುಲವಾಗಿ ಬರೆದಿದ್ದಾರೆ. ಆದರೆ ಇವರ ಪ್ರಾತಿನಿಧಿಕ ಕಾರ್ಯಕ್ಷೇತ್ರ ತತ್ತ್ವಶಾಸ್ತ್ರ. ಬಿ.ಎ. ಪದವಿಯಲ್ಲಿ ಓದುವಾಗಿ ತತ್ತ್ವಶಾಸ್ತ್ರದತ್ತ ಇವರ ಒಲವು ಹರಿಯಿತು. ಇಲ್ಲಿಂದ ಆರಂಭಗೊಂಡ ಇವರ ತತ್ತ್ವಶಾಸ್ತ್ರದ ಅಧ್ಯಯನ ಬದುಕಿನ ಕೊನೆಯ ಕ್ಷಣದವರೆಗೂ ಸಾಗಿತು. ಅಗಾಧವಾದ ಇವರ ಓದು ಹಾಗೂ ತತ್ತ್ವಶಾಸ್ತ್ರವನ್ನು ಇವರು ಅರ್ಥಮಾಡಿಕೊಂಡ ರೀತಿ ಇವೆರಡೂ ಅನನ್ಯವಾದವು. ಬ್ರಹ್ಮಚರ್ಯ ಹಾಗೂ ಬ್ರಹ್ಮಜ್ಞಾನ ಇವುಗಳಿಗೆ ರಾಧಾಕೃಷ್ಣನ್ ಅಪೂರ್ವ ಅರ್ಥವಂತಿಕೆಯನ್ನು ನೀಡಿದರು. ತತ್ತ್ವಶಾಸ್ತ್ರ ಅಥವಾ ಆಧ್ಯಾತ್ಮವಿದ್ಯೆ ಎಂದರೆ ಕೇವಲ ಚಿಂತನಾ ವಿಧಾನವಲ್ಲ, ಅದು ಮಾದರಿಯಾಗಿ ಬದುಕುವ ವಿಧಾನ ಎಂಬುದನ್ನು ಇವರು ಕಾರ್ಯತಃ ಸಾಧಿಸಿತೋರಿಸಿದರು. ಅಖಂಡ ಪಾಂಡಿತ್ಯ, ಅತ್ಯುತ್ತಮ ಪ್ರವಚನಕಾರ ಮತ್ತು ಉದಾತ್ತ ಭಾಷ್ಯಕಾರರೆಂಬ ಹೆಗ್ಗಳಿಕೆ.

ಶಿಕ್ಷಣ ಹಾಗೂ ತತ್ತ್ವಶಾಸ್ತ್ರ ಕ್ಷೇತ್ರಗಳಿಗೆ ರಾಧಾಕೃಷ್ಣನ್ ನೀಡಿದ ಸೇವೆ ಅಪೂರ್ವವಾದುದು. ಇವರ ಜೀವನ ಆರಂಭಗೊಂಡದ್ದೇ ತತ್ತ್ವಶಾಸ್ತ್ರ ಅಧ್ಯಾಪನ ವೃತ್ತಿಯಿಂದ. ಮದರಾಸಿನ (ಈಗಿನ ಚಿನ್ನೈ) ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವೃತ್ತಿಯನ್ನಾರಂಭಿಸಿದ ಇವರು ತರುವಾಯ ಅದೇ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾದರು. 1918-21ರ ವರೆಗೆ ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಿನಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ನೇಮಕವಾದರು. ಅವರ ಬಳಿ ವೇದಾಂತವನ್ನು ಕಲಿತ ಅನೇಕ ಮಂದಿ ಶಿಷ್ಯರು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಮುಂದೆ ಘನವಿದ್ವಾಂಸರಾಗಿ ಅರಳಿದರು. ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ಕಿಂಗ್‍ಜಾರ್ಜ್ ಗಿ ತತ್ತ್ವಶಾಸ್ತ್ರ ಪ್ರಾಧ್ಯಾಪಕರಾಗಿ 1921-31ರವರೆಗೆ ಸೇವೆ ಸಲ್ಲಿಸಿದರು. ಆಗಲೇ ಗುರುದೇವ ರವೀಂದ್ರ ಮತ್ತು ಗಾಂಧೀಜಿಯ ಪರಿಚಯ ಅವರಿಗೆ ಲಭ್ಯ. ಈ ನಡುವೆ 1931ರಲ್ಲಿ ಆಂಧ್ರ ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಾಗಿ ನೇಮಕಗೊಂಡು 1936ರ ವರೆಗೆ ಸೇವೆ ಸಲ್ಲಿಸಿದರು. ಮತ್ತೆ 1937ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ತತ್ತ್ವಶಾಸ್ತ್ರ ಪ್ರಾಧ್ಯಾಪಕರಾದರು (1937-44). 1939-48ರ ವರೆಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಕುಲಪತಿಗಳಾಗಿಯೂ 1953-62ರ ವರೆಗೆ ದೆಹಲಿ ವಿಶ್ವವಿದ್ಯಾಲಯದ ಕುಲಪತಿಗಳಾಗಿಯೂ ಸೇವೆಸಲ್ಲಿಸಿದರು. ಶಿಕ್ಷಣಕ್ಷೇತ್ರದಲ್ಲಿ ರಾಧಾಕೃಷ್ಣನ್ ಅವರ ಹೆಸರು ಹೊರದೇಶಗಳಿಗೂ ವಿಸ್ತರಿಸಿತು. ಪೌರ್ವಾತ್ಯ ಧರ್ಮ ಹಾಗೂ ನೀತಿಶಾಸ್ತ್ರದ ಪ್ರಾಧ್ಯಾಪಕರಾಗಿ (1932-52) ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ನೇಮಕಗೊಂಡ ರಾಧಾಕೃಷ್ಣನ್ ಪ್ರಥಮ ಭಾರತೀಯ. ಮ್ಯಾಂಚೆಸ್ಟರ್. ಆಕ್ಸಫರ್ಡ್ ಷಿಕಾಗೊ. ಲಂಡನ್‍ಗಳಲ್ಲಿನ ಅನೇಕ ವಿಶ್ವವಿದ್ಯಾಲಯಗಳಲ್ಲಿ ಆಹ್ವಾನಿತ ಉಪನ್ಯಾಸಕರಾಗಿದ್ದ ರಾಧಾಕೃಷ್ಣನ್ ಪೌರ್ವಾತ್ಯ ತತ್ತ್ವಶಾಸ್ತ್ರಕ್ಕೆ ಜಾಗತಿಕ ನೆಲೆಯಲ್ಲಿ ಆಧುನಿಕ ದೃಷ್ಟಿಕೋನವನ್ನು ಅಳವಡಿಸಿ ಈ ಬಗ್ಗೆ ಪಾಶ್ಚಾತ್ಯ ವಿದ್ವಾಂಸರಿಗೆ ಆಸಕ್ತಿ ಉಂಟಾಗುವಂತೆ ಮಾಡಿದರು. ಇವುಗಳಿಗೆ ಪೂರಕವಾಗಿ ಇವರು ನಿರ್ವಹಿಸಿದ ಜವಾಬ್ದಾರಿಯುತ ಸ್ಥಾನಮಾನಗಳು ವೈವಿಧ್ಯಮಯವಾದವು. ಭಾರತೀಯ ನಿಯೋಗದ ಮುಖ್ಯಸ್ಥರಾಗಿ ಯುನೆಸ್ಕೊಗೆ 1946-50ರ ಅವಧಿಯಲ್ಲಿ ಹಲವುಬಾರಿ ಭೇಟಿನೀಡಿದರು. ವಿಶ್ವವಿದ್ಯಾಲಯಗಳ ಶಿಕ್ಷಣ ಆಯೋಗದ ಅಧ್ಯಕ್ಷರಾಗಿ 1948ರಲ್ಲಿ ಭಾರತ ಸರ್ಕಾರದಿಂದ ನೇಮಕಗೊಂಡರು. ಯುನೆಸ್ಕೊ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ (1952). ಪಿ.ಇ.ಎನ್.ಕಾಂಗ್ರೆಸ್ ಅಧ್ಯಕ್ಷರಾಗಿ, ಅಂತಾರಾಷ್ಟ್ರೀಯ ಪಿ.ಇ.ಎನ್.ಉಪಾಧ್ಯಕ್ಷರಾಗಿ, ಬ್ರಿಟಿಷ್ ಅಕಾಡಮಿಯ ಗೌರವ ಸದಸ್ಯರಾಗಿ (1962), ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ಆಶ್ರಯದಲ್ಲಿ 1962ರಲ್ಲಿ ಜರುಗಿದ ತತ್ತ್ವಶಾಸ್ತ್ರ ಸಮ್ಮೇಳನಕ್ಕೆ ಕಲ್ಕತ್ತ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಭಾರತೀಯ ಹಾಗೂ ಪೌರ್ವಾತ್ಯ ರಾಷ್ಟ್ರಗಳ ತತ್ತ್ವಜ್ಞಾನದ ಸೊಬಗನ್ನು, ಆದರ್ಶಗಳನ್ನು ಜಗತ್ತಿಗೆ ಪರಿಚಯಿಸಿದರು. ಮತ ಧರ್ಮಶಾಸ್ತ್ರ ಹಾಗೂ ನೀತಿಶಾಸ್ತ್ರ ಇವುಗಳಲ್ಲಿ ಜಗತ್ತಿನ ತತ್ತ್ವಶಾಸ್ತ್ರಜ್ಞರಲ್ಲೇ ರಾಧಾಕೃಷ್ಣನ್ ಶಿಖರಪ್ರಾಯರೆಂದು ಪರಿಗಣಿತರಾಗಿದ್ದಾರೆ. ತತ್ತ್ವಶಾಸ್ತ್ರಜ್ಞರ ಗ್ರಂಥಭಂಡಾರ ಮಾಲಿಕೆಯಲ್ಲಿ ವಿಶ್ವಮಾನ್ಯರಾದ ಜಿ.ಇ.ಮೂರೆ, ಬರ್ಟ್‍ರಂಡ್ ರಸಲ್ ಮತ್ತು ಕಾರ್ಲ್‍ಜೆಸ್ಟರ್ಸ್‍ರ ಜೊತೆಯಲ್ಲಿ ರಾಧಾಕೃಷ್ಣನ್ ಅವರ ತತ್ತ್ವ ಶಾಸ್ತ್ರದ ವಿಚಾರಧಾರೆಯನ್ನು ಪ್ರತ್ಯೇಕ ಸಂಪುಟದಲ್ಲಿ ನ್ಯೂಯಾರ್ಕಿನ ಪ್ರತಿಷ್ಠಿತ ತ್ಯುದರ್ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ. 

ರಾಧಾಕೃಷ್ಣನ್ ಅವರ ಕೊಡುಗೆಯನ್ನು ಪಡೆದ ಇನ್ನೊಂದು ಪ್ರಮುಖ ಕ್ಷೇತ್ರ ಆಡಳಿತ ಮತ್ತು ರಾಜಕೀಯ. 1949ರಿಂದ 52ರವರೆಗೆ ಸೋವಿಯತ್ ರಷ್ಯಕ್ಕೆ ಭಾರತದ ರಾಯಭಾರಿಯಾಗಿದ್ದ ರಾಧಾಕೃಷ್ಣನ್ ಭಾರತಕ್ಕೆ ಮರಳಿಬಂದ ತರುವಾಯ 1952-62ರವರೆಗೂ ಭಾರತದ ಉಪರಾಷ್ಟ್ರಪತಿಗಳಾಗಿಯೂ 1962-67ರ ವರೆಗೆ ರಾಷ್ಟ್ರಪತಿಗಳಾಗಿಯೂ ಸೇವೆಸಲ್ಲಿಸಿದರು. ರಾಧಾಕೃಷ್ಣನ್ ಅವರ ವೈವಿಧ್ಯಮಯ ಅನನ್ಯ ಕೊಡುಗೆಗಳನ್ನು ಗಮನಿಸಿ ಇವರಿಗೆ ಭಾರತ ಸರ್ಕಾರ ರಾಷ್ಟ್ರದ ಪರಮೋಚ್ಚ ಪ್ರಶಸ್ತಿಯಾದ ಭಾರತರತ್ನವನ್ನು ನೀಡಿ ಗೌರವಿಸಿತು(1954). ಯಾರಿಗೂ ಸಂದರ್ಶನ ನೀಡದಿದ್ದ ರಷ್ಯದ ಸರ್ವಾಧಿಕಾರಿ ಸ್ಟಾಲಿನ್ ಇವರಿಗೆ ಮೂರು ಬಾರಿ ಅವಕಾಶ ನೀಡಿದ್ದು ಒಂದು ವಿಶೇಷ. ರಾಷ್ಟ್ರಪತಿಯಾಗಿ ಸ್ಥಾನಕ್ಕೆ ಮೆರುಗು ಕೊಟ್ಟರು. ಆದುದರಿಂದಲೇ ಅವರು ಅಕ್ಷರಶಃ ಅನಘ್ರ್ಯ `ಭಾರತರತ್ನ'.

ರಾಧಾಕೃಷ್ಣನ್ ತಮ್ಮನ್ನು ಸಂಪೂರ್ಣವಾಗಿ ಶಿಕ್ಷಣ, ಸಂಸ್ಕೃತಿಗಳ ಸೇವೆಯಲ್ಲಿ ತೊಡಗಿಸಿಕೊಂಡರು. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚಳವಳಿಗಳ ತೀವ್ರ ಸಂದರ್ಭಗಳಲ್ಲೂ ತಮ್ಮ ಆಯ್ಕೆಯ ಕ್ಷೇತ್ರಗಳನ್ನು ತೊರೆದವರಲ್ಲ. ಶಿಕ್ಷಣ, ಸೇವೆ, ತಾತ್ತ್ವಿಕ ವಿಚಾರಧಾರೆ, ಸಾಹಿತ್ಯ ಸೃಷ್ಟಿ, ಆಡಳಿತ ಇವುಗಳನ್ನೆಲ್ಲ ಏಕಕಾಲಕ್ಕೆ ಇವರು ನಿರ್ವಹಿಸಿದ ರೀತಿ ಬೆರಗುಗೊಳಿಸುವಂಥದ್ದು. 1908ರಲ್ಲಿ ತಮ್ಮ ಸ್ನಾತಕೋತ್ತರ ಪದವಿಗಾಗಿ ರಚಿಸಿದ `ಎತಿಕ್ಸ್ ಆಫ್ ವೇದಾಂತ ಅಂಡ್ ಇಟ್ಸ್ ಮೆಟೀರಿಯಲ್ ಪ್ರೀಸಪೋಸಿಷನ್' (ವೇದಾಂತದ ನೀತಿತತ್ತ್ವಗಳು ಮತ್ತು ಅದರ ವಾಸ್ತವಿಕ ಮುಂಭಾವನೆ) ಗ್ರಂಥ ಇವರ ತಾತ್ತ್ವಿಕ ಪ್ರಖರತೆಯನ್ನು ಮೊತ್ತಮೊದಲು ಸಾದರಪಡಿಸಿತು. ಇದನ್ನು ರಚಿಸಿದಾಗ ಇವರಿಗೆ ಇಪ್ಪತ್ತರ ವಯಸ್ಸು. ಮದರಾಸು ವಿಶ್ವವಿದ್ಯಾಲಯ ಪ್ರಕಟಿಸಿದ ಈ ಕೃತಿ ತತ್ತ್ವಶಾಸ್ತ್ರ ಕ್ಷೇತ್ರದಲ್ಲಿ ರಾಧಾಕೃಷ್ಣನ್ ಅವರ ಸ್ಥಾನ ನಿರ್ದೇಶನಕ್ಕೆ ಕಾರಣವಾಯಿತು. ದಿ ಫಿಲಾಸಫಿ ಆಫ್ ರವೀಂದ್ರನಾಥ ಟಾಗೂರ್(1918). ಐಡಿಯಲಿಸ್ಟ್ ವ್ಯೂ ಆಫ್ ಲೈಫ್(1932), ಈಸ್ಟರ್ನ್ ರಿಲಿಜನ್ಸ್ ಅಂಡ್ ವೆಸ್ಟರ್ನ್ ಥಾಟ್(91939), ದಿ ರೆಯ್ನ್ ಆಫ್ ರಿಲಿಜಿಯನ್ ಇನ್ ಕಾಂಟೆಂಪೊರರಿ ಫಿಲಾಸಫಿ(1920). ಇಂಡಿಯನ್ ಫಿಲಾಸಫಿ (1923,1927 ಎರಡು ಸಂಪುಟಗಳು), ದಿ ಹಿಂದೂ ವ್ಯೂ ಆಫ್ ಲೈಫ್ (1932)-ಇವು ರಾಧಾಕೃಷ್ಣನ್ ಅವರ ಬಹುಮುಖ್ಯ ಕೃತಿಗಳು. ಇವರು ಅನುವಾದಿಸಿರುವ ಹಾಗೂ ಸಂಪಾದಿಸಿರುವ ಕೃತಿಗಳಲ್ಲಿ ಭಗವದ್ಗೀತ(1948), ದಿ ಪ್ರಿನ್ಸಿಪಲ್ ಉಪನಿಷತ್ಸ್(1953), ಬ್ರಹ್ಮಸೂತ್ರ(1960)-ಇವು ಅತ್ಯಂತ ಗಮನಾರ್ಹವಾದುವು. ರಾಧಾಕೃಷ್ಣನ್ ಅವರ ಕೃತಿಗಳು ಸಮೃದ್ಧ ಮಾಹಿತಿಗಳಿಂದಲೂ ಟಿಪ್ಪಣಿಗಳಿಂದಲೂ ವಿಸ್ತøತ ಪ್ರಸ್ತಾವನೆಗಳಿಂದಲೂ ಕೂಡಿ ವೈಶಿಷ್ಟ್ಯಪೂರ್ಣವಾಗಿವೆ. ರಾಧಾಕೃಷ್ಣನ್ ಅವರ ಕೃತಿಗಳಲ್ಲಿ ಶಿಕ್ಷಣ, ತತ್ತ್ವಶಾಸ್ತ್ರ, ಮತ ಧರ್ಮಶಾಸ್ತ್ರ, ನೀತಿಶಾಸ್ತ್ರ ಹಾಗೂ ಸಂಸ್ಕೃತಿ ಜಿಜ್ಞಾಸೆಗಳಿಗೆ ಸಂಬಂಧಿಸಿದ ವಸ್ತುಗಳು ವಿಶೇಷವಾಗಿವೆ. 

ರಾಧಾಕೃಷ್ಣನ್ ರಾಜತಾಂತ್ರಿಕರಾಗಿ ಜಪಾನ್, ಸಿಂಗಪೂರ್, ಇಂಡೋನೇಷ್ಯ, ಚೀನ, ಬೆಲ್ಜಿಯಮ್, ಪೋಲೆಂಡ್, ಚಿಕೊಸ್ಲೊವಾಕಿಯ, ಸೋವಿಯತ್ ರಷ್ಯ, ಹಂಗರಿ, ಬಲ್ಗೇರಿಯ, ಪೂರ್ವ ಮತ್ತು ಕೇಂದ್ರ ಆಫ್ರಿಕದೇಶಗಳಿಗೆ 1956ರಲ್ಲಿಯೂ ನೆರೆರಾಷ್ಟ್ರಗಳಾದ ಚೀನ, ಮಂಗೋಲಿಯ, ಹಾಂಕಾಂಗ್‍ಗಳಿಗೆ 1957ರಲ್ಲಿಯೂ ಸೌಹಾರ್ದ ಭೇಟಿನೀಡಿ ಆ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧ ವೃದ್ದಿಸುವಂತೆ ಶ್ರಮಿಸಿದರು. ಗ್ರೇಟ್‍ಬ್ರಿಟನ್, ನೇಪಾಲ(1963), ರಷ್ಯ, ಐರ್ಲೆಂಡ್(1964) ದೇಶಗಳಿಗೆ ಅಧಿಕೃತ ಭೇಟಿನೀಡಿ ರಾಜಕೀಯ ಮುತ್ಸದ್ಧಿಯಾಗಿ ಜಾಗತಿಕ ಭ್ರಾತೃತ್ವಕ್ಕಾಗಿ ಶ್ರಮಿಸಿದರು. 

ಸಮಕಾಲೀನ ಜಗತ್ತಿನ ಹಲವು ಕ್ಷೇತ್ರಗಳಿಗೆ ರಾಧಾಕೃಷ್ಣನ್ ನೀಡಿದ ಕೊಡುಗೆಯನ್ನು ಮನಗಂಡು ಅನೇಕ ರಾಷ್ಟ್ರಗಳು ಮತ್ತು ಅಂತಾರಾಷ್ಟ್ರೀಯ ವ್ಯವಸ್ಥೆಗಳು, ವಿಶ್ವವಿದ್ಯಾಲಯಗಳು, ಇವರನ್ನು ಪುರಸ್ಕರಿಸಿವೆ. ನೈಟ್‍ಹುಡ್(1931), ಟೆಹರಾನ್ ವಿಶ್ವವಿದ್ಯಾಲಯದ ಗೌರವ ಡಾಕ್ಟೊರೇಟ್ (1963), ನೇಪಾಲದ ತ್ರಿಭುವನ್ ವಿಶ್ವವಿದ್ಯಾಲಯ ನೀಡಿದ ಗೌರವ ಡಿಲಿಟ್, ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯದ ಗೌರವ ಡಾಕ್ಟರ್ ಆಫ್ ಲಾ (1963), ಮಾಸ್ಕೊ ವಿಶ್ವವಿದ್ಯಾಲಯದ ಗೌರವ ಡಾಕ್ಟೊರೇಟ್ (1964), ಐರ್ಲೆಂಡ್ ನ್ಯಾಷನಲ್ ವಿಶ್ವವಿದ್ಯಾಲಯ ನೀಡಿದ ಗೌರವ ಡಾಕ್ಟರ್ ಆಫ್ ಲಾ(1964)-ಈ ಪುರಸ್ಕಾರಗಳು ಮುಖ್ಯವಾದವು. ಇವುಗಳಲ್ಲದೆ ಆಕ್ಸ್‍ಫರ್ಡ್, ಕೇಂಬ್ರಿಜ್, ರೋಮ್ ಮುಂತಾದ ವಿಶ್ವವಿದ್ಯಾಲಯಗಳು ನೀಡಿದ ನೂರಕ್ಕೂ ಮಿಕ್ಕಿದ ಗೌರವ ಪುರಸ್ಕಾರಗಳು, ಬಕಿಂಗ್‍ಹ್ಯಾಮ್ ಅರಮನೆ ನೀಡಿದ ಆರ್ಡರ್ ಆಫ್ ಮೆರಿಟ್ ಗೌರವ ಸದಸ್ಯತ್ವ (1963) ಮೊದಲಾದವುಗಳನ್ನು ಇಲ್ಲಿ ಉಲ್ಲೇಖಿಸಬಹುದು. 

ರಾಧಾಕೃಷ್ಣನ್ ಒಂದೆಡೆ ತಮ್ಮ ಜೀವನದ ಬಗ್ಗೆ ಹೀಗೆ ಹೇಳಿಕೊಂಡಿದ್ದಾರೆ. "ಹಿರಿಯರಿಂದ ಕಿರಿಯರಿಗೆ ಬರಬಹುದಾದ ಹುಟ್ಟಿನ ಹಿರಿಮೆಯನ್ನಾಗಲೀ ಸಂಪತ್ತಿನ ಸೊಬಗನ್ನಾಗಲೀ ನಾನು ನನ್ನ ಎಳೆತನದಲ್ಲಿ ಕಾಣಲಿಲ್ಲ. ನಾನು ನಾನಾಗಿಯೆ ಬಾಳಿದೆ, ನಾನಾಗಿಯೇ ಬೆಳೆದೆ, ದೇವರ ದಯದಿಂದ ಮಾತ್ರ ಬೆಳಕು ಕಂಡೆ". ಈ ಮಾತುಗಳಲ್ಲಿ ಸರ್ವಪಲ್ಲಿಯವರು ಬದುಕನ್ನು ನೋಡಿದ ದೃಷ್ಟಿ, ಗ್ರಹಿಸಿದ ರೀತಿಗಳು ಆದರ್ಶಪ್ರಾಯವಾಗಿ ಮೂಡಿವೆ. ತತ್ತ್ವಶಾಸ್ತ್ರ, ಸಾಹಿತ್ಯ, ಸೃಷ್ಟಿ, ಆಡಳಿತ, ರಾಜಕೀಯ, ಶಿಕ್ಷಣ ಕ್ಷೇತ್ರಗಳಲ್ಲಿ ವಿದ್ವತ್ಪೂರ್ಣ ಕೆಲಸಮಾಡಿ ಮೇರುಸದೃಶ ಸಾಧನೆಯನ್ನು ಮಾಡಿದ ಸರ್ವಪಲ್ಲಿಯವರು 1975 ಏಪ್ರಿಲ್ 17ರಂದು ನಿಧನ ಹೊಂದಿದರು. 1956ರಲ್ಲಿ ಇವರ ಪತ್ನಿ ಕಾಲವಾಗಿದ್ದರು. 

ಮಹಾನ್ ವಾಗ್ಮಿಯೂ ಆಗಿದ್ದ ಸರ್ವಪಲ್ಲಿಯವರು ಮಹಾನ್ ಮಾನವತಾವಾದಿಯಾಗಿ ಮಾನವ ಸಮುದಾಯದ ಶ್ರೇಯಸ್ಸಿಗಾಗಿ ಬದುಕಿಡೀ ದುಡಿದರು. ಸರ್ವಪಲ್ಲಿ ಅವರದು ಅಪೂರ್ವ ವಾಣೀವಿಲಾಸ ವೈಭವ. ಮಾತುಗಾರಿಕೆ ಜೋಗದ ಜಲಪಾತದಂತೆ. ಅಪರೂಪ ಶಬ್ದಸಂಯೋಜನೆ. ಮಾತು, ಬರಹ ಎರಡೂ ಅತಿ ಸ್ಫುಟ. ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಇವರ ಸೇವೆಯನ್ನು ಸ್ಮರಿಸಲು ರಾಧಾಕೃಷ್ಣನ್‍ರ ಜನ್ಮದಿನವನ್ನು (ಸೆಪ್ಟಂಬರ್ 5) ಭಾರತದಲ್ಲಿ ಶಿಕ್ಷಕರ ದಿನಾಚರಣೆಯನ್ನಾಗಿ ಪ್ರತಿವರ್ಷ ಆಚರಿಸಲಾಗುತ್ತಿದೆ. ಡಾ. ರಾಧಾಕೃಷ್ಣನ್ ಅವರ ಅತಿ ನಿಕಟ ಮಿತ್ರ ಜವಹರಲಾಲ್ ನೆಹರೂ ಬಣ್ಣಿಸಿದಂತೆ, ಅವರೊಬ್ಬ ಮಹಾನ್ ದಾರ್ಶನಿಕ, ಮಹಾನ್ ಶಿಕ್ಷಣವೇತ್ತ ಹಾಗೂ ಮಹಾನ್ ಪರಿಪೂರ್ಣ ಮಾನವತಾವಾದಿ.
					    
(ಎಸ್.ಆರ್.ಐ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ